ನೇಗೆಲಿ, ಕಾರ್ಲ್ ವಿಲ್‍ಹೆಲ್ಮ್ ಫಾನ್
	1817-1882. ಸ್ಕಾಟ್ಲೆಂಡಿನ ಹೆಸರಾಂತ ಸಸ್ಯಶಾಸ್ತ್ರಜ್ಞ ಹಾಗೂ ಸಿದ್ಧಾಂತಿ. 1817ರ ಮಾರ್ಚ್ 18 ರಂದು ಸ್ವಿಟ್ಜರ್ಲೆಂಡಿನ ಕಿಲ್‍ಶ್‍ಬರ್ಗ್ ಎಂಬ ಊರಿನ ಒಂದು ವೈದ್ಯಕುಟುಂಬದಲ್ಲಿ ಜನಿಸಿದ. ಕಿಲ್‍ಶ್‍ಬರ್ಗ್‍ಗೆ ಹತ್ತಿರದ ಜûೂರಿಕ್‍ನ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಮುಗಿಸಿ ಅನಂತರ ಜûೂರಿಕ್ ವಿಶ್ವವಿದ್ಯಾಲಯವನ್ನು ವೈದ್ಯಕೀಯ ಅಧ್ಯಯನ ಕ್ಕಾಗಿ ಸೇರಿದ. ಈತನ ಒಲವು ಪ್ರಕೃತಿ ವಿಜ್ಞಾನದ ಕಡೆ ಇದ್ದುದರಿಂದ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲಿಲ್ಲ. ಪ್ರಾಣಿಶಾಸ್ತ್ರದ ಪ್ರಾಧ್ಯಾಪಕ ಓಕೆನ್‍ರ ಉಪನ್ಯಾಸಗಳೇ ಇದಕ್ಕೆ ಪ್ರಚೋದನೆಯಾಯಿತು. 1839ರಲ್ಲಿ ವೈದ್ಯಕೀಯ ಶಿಕ್ಷಣವನ್ನು ಬಿಟ್ಟು ಜಿನೀವದಲ್ಲಿ ಪ್ರಾಧ್ಯಾಪಕ ಡ ಕಾಂಡಾಲ್ ಹತ್ತಿರ ಸಸ್ಯಶಾಸ್ತ್ರ ಅಧ್ಯಯನಕ್ಕೆ ಸೇರಿ 1840ರಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ. ಸ್ವಲ್ಪಕಾಲ ಬರ್ಲಿನ್‍ನಲ್ಲಿ ಕೆಲಸಮಾಡಿದ ಮೇಲೆ 1842ರಲ್ಲಿ ಯೇನಕ್ಕೆ ಬಂದು ಅಲ್ಲಿ ಷ್ಲೈಡನ್‍ನ ಜೊತೆ ಕೆಲಸಮಾಡಿದ. ಈ ಅವಧಿಯಲ್ಲಿ ಮಾಡಿದ ಕೆಲಸಗಳು ನಿಜಕ್ಕೂ ಬಹಳ ಫಲಕಾರಿಯಾದುವು. ಅನಂತರ ಜûೂರಿಕ್‍ಗೆ ಹಿಂದಿರುವ ಮೊದಮೊದಲು ಕೆಲವು ಖಾಸಗಿ ಸಂಸ್ಥೆಗಳಲ್ಲಿಯೂ ಅನಂತರ ವಿಶ್ವವಿದ್ಯಾಲಯದಲ್ಲಿ ಉಪಪ್ರಾಧ್ಯಾಪಕನಾಗಿಯೂ ಕೆಲಸಮಾಡಿ 1857ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಪ್ರಾಧ್ಯಾಪಕ ಹುದ್ದೆಯನ್ನು ಅಲಂಕರಿಸಿದ.

	ನೇಗೆಲಿ ಸಸ್ಯಜೀವಕೋಶಗಳ ವಿಭಜನೆಯಲ್ಲಿ ಆಸಕ್ತನಾಗಿದ್ದ. ಆ ಕಾಲದಲ್ಲಿ ಷ್ಲೈಡನ್ನನು ತನ್ನ ಅತಿಮುಖ್ಯ ಸಿದ್ಧಾಂತವಾದ ಸೆಲ್ ಥಿಯೊರಿಯನ್ನು ಪ್ರತಿಪಾದಿಸಿದ್ದ. ಇದರ ಪ್ರಕಾರ ಜೀವಿಗಳು, ಕೋಶಗಳಿಂದ ಮತ್ತು ಇವುಗಳ ಅಂಶಗಳಿಂದ ಕೂಡಿವೆ ಮತ್ತು ಹೊಸ ಕೋಶಗಳು ಯಾವಾಗಲೂ ಮುಂಚೆಯೇ ಇರುವ ಕೋಶಗಳಿಂದ ಮಾತ್ರ ಬರುತ್ತವೆ. ಈ ಸಿದ್ಧಾಂತದಲ್ಲಿ ಹಲವು ನ್ಯೂನತೆಗಳೂ ಇದ್ದುವು : ಹೂಬಿಡದ ಸಸ್ಯಗಳ ಬೀಜಕಣಗಳ ಮತ್ತು ಹೂಬಿಡುವ ಸಸ್ಯಗಳ ಬೀಜಕಣಗಳ ಮತ್ತು ಹೂಬಿಡುವ ಸಸ್ಯಗಳ ಪರಾಗರೇಣುಗಳ ಸಾಮ್ಯತೆ ಮತ್ತು ಭ್ರೂಣ ಪರಾಗ ನಳಿಕೆಯ ತುದಿಯಿಂದಲೇ ಬರುತ್ತದೆಂದು ತಿಳಿಸಿದ್ದು. ಈ ಹಲವಾರು ಆಭಾಸಗಳನ್ನು ನೇಗೆಲಿ ತನ್ನ ಸಂಶೋಧನೆಗಳಿಂದ ತಪ್ಪೆಂದು ತೋರಿಸಿದ.

	ಕೋಶವಿಭಜನೆಯ ಬಗ್ಗೆ ಈತ ನಡೆಸಿದ ಸಂಶೋಧನೆಯಿಂದಾಗಿ (1844, 1846) ಕೋಶಗಳ ಹುಟ್ಟು ಎರಡು ರೀತಿಯಿಂದ ಆಗುವುದೆಂದು ತಿಳಿಯಿತು : 1 ಸ್ವತಂತ್ರ ಕೋಶಗಳ ಉದ್ಭವ ಮತ್ತು 2 ಪೂರ್ವಭಾವಿ ಕೋಶಗಳ ವಿಭಜನೆಯಿಂದ ಹೊಸ ಕೋಶಗಳ ಉದ್ಭವ. ಪಾಚಿಗಳಲ್ಲಿ ಡಯಾಟಮ್ ಸಸ್ಯಗಳಲ್ಲಿ ಹಾಗೂ ಪ್ರಜನನಾಂಗಗಳಲ್ಲಿ ಮಾತ್ರ ಸ್ವತಂತ್ರ ಕೋಶಗಳ ಉದ್ಭವವಿರುವುದೂ ದೈಹಿಕಾಂಗಗಳಲ್ಲಿ ಕೋಶವಿಭಜನೆಗಳಿಂದಾಗಿ ಹೊಸಕೋಶಗಳು ಉದ್ಭವವಿರುವುದೂ ಗೊತ್ತಾಯಿತು. ಈ ಸಂಶೋಧನೆಯಿಂದಾಗಿ ಹೊಸಕೋಶಗಳು ನ್ಯೂಕ್ಲಿಯಸ್ ಮೇಲಿಂದ ಬರುವ ಅಂಕುರಗಳಿಂದ ಹುಟ್ಟುವುವೆಂಬ ಷ್ಲೈಡನ್‍ನ ಅಭಿಪ್ರಾಯ ಸುಳ್ಳಾಯಿತು. ಅಲ್ಲದೆ ಕೋಶ ವಿಭಜನೆಯಲ್ಲಿ ಎರಡು ಮರಿಕೋಶಗಳ ಮಧ್ಯೆ ಮೂಡುವ ಭಿತ್ತಿ ವಿಭಜನೆಯ ಪರಿಣಾಮವಾಗಿಯೇ ಹೊರತು ವಿಭಜನೆಗಾಗಿ ಅಲ್ಲ ಎಂದು ತಿಳಿದುಬಂತು.

	1847ರ ತರುವಾಯ ನೇಗೆಲಿ ನಡೆಸಿದ ಸಂಶೋಧನೆಗಳು ಸಸ್ಯಗಳ ಬೆಳವಣಿಗೆಗೆ ಸಂಬಂಧಪಟ್ಟವು. ಬೆಳವಣಿಗೆಯಲ್ಲಿ ಹೊಸ ಹೊಸ ಅಂಗಾಂಶಗಳ ಹುಟ್ಟುವಿಕೆ ಮತ್ತು ಅವುಗಳ ಮಾರ್ಪಾಟುಗಳನ್ನು ಬೇರಿನ ಹಾಗೂ ಕಾಂಡದ ತುದಿಗಳಿಂದ ಅಭ್ಯಸಿಸಿ, ಇವೆಲ್ಲವೂ ಸಸ್ಯಾಂಗಗಳ ತುದಿಯಲ್ಲಿರುವ ಏಕೈಕ ಕೋಶದಿಂದ (ಅಗ್ರಕೋಶ) ಬರುತ್ತವೆಂದು ಈತ ತಿಳಿಯಪಡಿಸಿದ. ಇದೇ ನೇಗೆಲಿಯ ಅಗ್ರಕೋಶ ಸಿದ್ಧಾಂತ (ಏಪಿಕಲ್ ಸೆಲ್ ಥಿಯೊರಿ) ಈರೀತಿಯ ಅಗ್ರಕೋಶವನ್ನು ಬ್ರಯೋಫೈಟ್ ಮತ್ತು ಟೆರಿಡೋಫೈಟ್‍ಗಳಲ್ಲಿ ಮಾತ್ರ ಕಾಣಬಹುದಾಗಿದ್ದು ಮುಂದುವರಿದ ಸಸ್ಯಗಳಲ್ಲಿ ಕಾಣಲಾಗುವುದಿಲ್ಲವೆಂದು ಮುಂದೆ ಕೆಲವು ತಜ್ಞರು ತಿಳಿಯಪಡಿಸಿದರು. ಅಲ್ಲದೆ ಸಸ್ಯಾಂಗಗಳ ಬೆಳವಣಿಗೆಯ ಭಾಗದಲ್ಲಿ ಎರಡು ರೀತಿಯ ಅಂಗಾಂಶವನ್ನು ಗುರುತಿಸಿದ ಕೀರ್ತಿಯೂ ನೇಗೆಲಿಗೆ ಸಲ್ಲಬೇಕು. ಈ ಅಂಗಾಂಶಗಳಲ್ಲಿ ವರ್ಧನ ಅಂಗಾಂಶಗಳು (ಮೆರಿಸ್ಟಮ್ಯಾಟಿಕ್ ಟಿಶ್ಯೂಸ್) ಸದಾ ವಿಭಜನೆಗೊಂಡು ಅವುಗಳಿಂದ ಬರುವ ಅಂಗಾಂಶಗಳ ವಿವಿಧ ಅಂಗಾಂಗಗಳನ್ನು ಉತ್ಪತ್ತಿಮಾಡುತ್ತವೆ ಮತ್ತು ಕೆಲವು ಅಂಗಾಂಶಗಳು ವಿಭಜನಾ ಸಾಮಥ್ರ್ಯವಿಲ್ಲದೆ ಇದ್ದು ಬಲಿತ ಅಂಗಾಂಶಗಳಾಗುತ್ತವೆ.

	1884ರಲ್ಲಿ ಫರ್ನ್ ಸಸ್ಯಗಳ ವೀರ್ಯಾಣುಗಳನ್ನೂ ರಿಕ್ಸಿಯೋಕಾರ್ಪಸ್ ಎಂಬ ಬ್ರಯೋಪೈಟ್ ಸಸ್ಯಗಳ ಸ್ತ್ರೀ ಜನನಾಂಗಗಳನ್ನೂ ಮತ್ತು ಪ್ರೋಟೊನೀಮಗಳನ್ನೂ ನೇಗೆಲಿ ಮೊದಲ ಬಾರಿಗೆ ಕಂಡುಹಿಡಿದ. ಇಂಥ ಹಲವಾರು ಸಂಶೋಧನೆ ಮತ್ತು ಸಿದ್ಧಾಂತಗಳಲ್ಲಿ ನೇಗೆಲಿ ಷ್ಲೈಡನ್ನನ ಪ್ರಭಾವಕ್ಕೊಳಗಾಗದಿರಲಿಲ್ಲ. ಅಲ್ಲದೆ, ಕೋಶಗಳ ಸೂಕ್ಷ್ಮರಚನೆಗೆ ಸಂಬಂಧಪಟ್ಟಂತೆ ಹಲವು ಸಂಶೋಧನೆಗಳನ್ನು ನಡೆಸಿ ಭಿತ್ತಿ ರಚನಾಸಾಮಗ್ರಿಯಾದ ಸೆಲ್ಯುಲೋಸ್ ಹಾಗೂ ಶೇಖರಣ ಆಹಾರವಾದ ಷಿಷ್ಟ ಪದಾರ್ಥಗಳ ಅಣುಮಾದರಿ ರಚನೆಯನ್ನು ಕಂಡುಹಿಡಿದು ಇವುಗಳ ಬಿಡಿಬಿಡಿ ಅಣುಗಳ ಸರಪಳಿಗಳು ಸೇರಿ ಮೈಸಿಲ್ಲೆಗಳೆಂಬ ಸೂಕ್ಷ್ಮ ಎಳೆಗಳಾಗಿರುತ್ತವೆಂದೂ ಇಂಥ ಮೈಸಿಲ್ಲೆಗಳು ಸೇರಿ ದಾರವಾದಂಥ ಎಳೆ ಆಗುತ್ತದೆಂದು ಮತ್ತು ಇಂಥ ಎಳೆಗಳಿಂದ ಪದರಗಳಾಗುತ್ತವೆಂದೂ ತಿಳಿಯಪಡಿಸಿದ. ಇದೇ ನೇಗೆಲಿಯ ಹೆಸರಾಂತ ಮೈಸಿಲ್ಲೆಗಳ ಸಿದ್ದಾಂತ. ಮೈಸಿಲ್ಲೆಗಳ ಅಧ್ಯಯನದಿಂದ ಪುಳಕಿತಗೊಂಡ ಇತರ ವಿಜ್ಞಾನಿಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಸಂಶೋಧನೆಗಳನ್ನು ನಡೆಸಿ ಕೋಶಗಳ ಸೂಕ್ಷ್ಮ ರಚನೆಯ ಅಭ್ಯಾಸವನ್ನು ಮುಂದುವರಿಸಿದರು.

	ನೇಗೆಲಿಗೆ ಡಾರ್ವಿನ್ನನ ವಿಕಾಸವಾದದಲ್ಲಿ ನಂಬಿಕೆಯಿದ್ದರೂ ಈತ ಅದರ ಬಗ್ಗೆ ತನ್ನದೇ ಆದ ಒಂದು ನಿಗೂಢ ಭಾವನೆಯನ್ನು ತಳೆದಿದ್ದ. ಪ್ರಕೃತಿಯು ಜೀವಿಗಳ ಆಯ್ಕೆಯಲ್ಲಿ ತನ್ನದೇ ಆದ ಬಲದಿಂದ ವಿಕಾಸದ ಗತಿಯನ್ನು ಮುಂದುವರಿಸುತ್ತದೆಂಬ ಡಾರ್ವಿನ್ನನ ವಾದವನ್ನು ಒಪ್ಪಿಕೊಳ್ಳದೆ ಜೀವಿಗಳ ಒಂದು ಸುಪ್ತ ಬಲವೇ ವಿಕಾಸವನ್ನು ಒಂದು ನಿರ್ದಿಷ್ಟ ಗುರಿಯೆಡೆಗೆ ಕೊಂಡೊಯ್ಯುತ್ತದೆಂದು ಈತ ನಂಬಿದ್ದ. ಇದರ ಪ್ರಕಾರ ಬದಲಾವಣೆ ಜೀವಿಗಳನ್ನು ಸದಾ ಉತ್ತಮಸ್ಥಿತಿಗೆ ಮತ್ತು ಪರಿಸರದೊಂದಿಗೆ ಹೊಂದಿಕೊಳ್ಳುವುದಕ್ಕೆ ಸಹಾಯಮಾಡುತ್ತದೆಂದು ಅಚಲ ನಂಚಿಕೆಯಿದ್ದ ನೇಗೆಲಿಯ ಮಹತ್ತರ ತಪ್ಪೆಂದರೆ ತನಗೆ ಮೆಂಡಲನು ಕಳಿಸಿದ್ದ ಮಿಶ್ರತಳೀಕರಣದ ಪ್ರಯೋಗಗಳನ್ನು ಬದಿಗೊತ್ತಿದ್ದು. ಮೆಂಡಲನ ಸಿದ್ದಾಂತಗಳ ಬಗ್ಗೆ ಅಪಾರ್ಥ ಕಲ್ಪಿಸಿದ್ದ ನೇಗೆಲಿಗೆ ಮೆಂಡಲ್ ಕೇವಲ ಧಾರ್ಮಿಕ ವ್ಯಕ್ತಿಯೇ ಆಗಿದ್ದು ವ್ಶೆಜ್ಞಾನಿಕ ವಿಚಾರಧಾರೆ ಇವನಿಂದ ಹೊರತು ಎಂಬ ಭಾವನೆ ಇತ್ತೆಂದು ತೋರುತ್ತದೆ. ಮಿಕ್ಕ ವಿಜ್ಞಾನಿಗಳೂ ಇವನಂಥ ಭಾವನೆ ತಳೆದಿದ್ದರಿಂದ ಮೆಂಡಲನ ಸಿದ್ಧಾಂತಗಳನ್ನು ತಳ್ಳಿಹಾಕಿದರು. ಇಂಥ ಅಚಾತುರ್ಯಕ್ಕಾಗಿ ಜಗತ್ಪ್ರಸಿದ್ದವಾದ ಮೆಂಡಲು ತತ್ತ್ವಗಳು ಬೆಳಕಿಗೆ ಬರಬೇಕಾದರೆ ಒಂದು ಪೀಳಿಗೆಯನ್ನೇ ಕಾಯಬೇಕಾಯಿತು. ನೇಗೆಲಿಯ ಶಿಷ್ಯನಾದ ಕಾರೆನ್ಸ್ ಇನ್ನಿಬ್ಬರ ಜೊತೆಯಲ್ಲಿ 1900ರಲ್ಲಿ ಮೆಂಡಲನ ತತ್ತ್ವಗಳನ್ನು ಮರು ಅನ್ವೇಷಿಸಿದರು. ನೇಗೆಲಿ 1882ರ ಮಾರ್ಚ್ 10 ರಂದು ಮರಣಿಸಿದ.
(ಕೆ.ಎಸ್.ಎನ್.ಎ.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ